ಬೇಸಿಗೆ ವಿದ್ಯಾಲಯ -
ವೃತ್ತಿನಿರತರಿಗೆ, ಆಯಾ ಕ್ಷೇತ್ರದಲ್ಲಿ ಆಗಿರುವ ಸೈದ್ಧಾಂತಿಕ ಮತ್ತು ಪ್ರಯೋಗಿಕ ಪ್ರಗತಿಯಲ್ಲಿ ಮುನ್ನಡೆಯನ್ನು ಪರಿಚಯ ಮಾಡಿಕೊಡಲು ವಿಶ್ವವಿದ್ಯಾಲಯದ ಮಟ್ಟದಲ್ಲಿ, ಬೇಸಿಗೆ ಕಾಲದಲ್ಲಿ ಆರು ಅಥವಾ ಎಂಟು ವಾರಗಳ ಅವಧಿಯ ನವೀಕರಣ ತರಗತಿಗಳು ನಡೆಯುವ ಶಾಲೆ (ಸಮ್ಮರ್ ಸ್ಕೂಲ್) ಇವು ಬೇಸಿಗೆ ವಿದ್ಯಾಲಯವೆಂದು ಹೆಸರಾಗಿದ್ದರೂ ಇವನ್ನು ಅಲ್ಪಾವಧಿಯ ತರಗತಿಗಳೆಂದೇ ಕರೆಯಬಹುದು. ಈ ರೀತಿಯ ತರಗತಿಗಳನ್ನು ಮೊತ್ತಮೊದಲು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಾಯೋಗಿಕವಾಗಿ ಆರಂಭಿಸಿತು (1869). ಅನಂತರ 1872ರಲ್ಲಿ ಅಲ್ಲಿ ಶಾಶ್ವತವಾಗಿ ಕಲೆ ಮತ್ತು ವಿಜ್ಞಾನಗಳಲ್ಲಿ ನವೀಕರಣ ಶಿಕ್ಷಣಕ್ಕಾಗಿ ಬೇಸಿಗೆ ತರಗತಿಗಳನ್ನು ಏರ್ಪಡಿಸುವ ವ್ಯವಸ್ಥೆ ಮಾಡಲಾಯಿತು. ಅಲ್ಲಿಯ ಇತರ ವಿಶ್ವವಿದ್ಯಾಲಯಗಳು ಈ ಯೋಜನೆಯನ್ನು ಅನುಕರಿಸಲಾರಂಭಿಸಿದುವು. ವೃತ್ತಿ ನಿರತರು ತಮ್ಮ ವೃತ್ತಿಗೆ ಸಂಬಂಧಿಸಿದ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಪಡಿಸಿಕೊಳ್ಳಲು ಇವು ಉತ್ತಮ ಯೋಜನೆಯೆಂದು ಅರಿತಂತೆ ಬೇಸಿಗೆ ತರಗತಿಗಳು ಬೇಗ ಜನಪ್ರಿಯವಾದವು, ಅನಂತರ ಇಂಗ್ಲೆಂಡಿನಲ್ಲೂ ಫ್ರಾನ್ಸ್, ಜರ್ಮನಿ, ಸ್ವಿಟ್‍ಜûರ್‍ಲೆಂಡ್ ಮುಂತಾದ ದೇಶಗಳಲ್ಲೂ ಪ್ರಚಾರಕ್ಕೆ ಬಂದುವು. 1960ರಿಂದ ಈಚೆಗೆ ಭಾರತದಲ್ಲೂ ವಿಶ್ವವಿದ್ಯಾಲಯದ ಧನ ಆಯೋಗ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.		  
  (ಜೆ.ಎಂ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ